ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿದನಂತೆ
ಒಂದು ಕಾಲದಲ್ಲಿ ಬೂದುಗುಂಬಳ ಕಾಯಿಯ ಕಳ್ಳನನ್ನು ಹಿಡಿಯಲು ಒಬ್ಬ ಜಾಣ ಒಂದು ಉಪಾಯ ಹೂಡಿದರು. ಕಳ್ಳನಾಗಿ ಇರಬಹುದೆಂಬ ಅನುಮಾನವಿರುವವರೆಲ್ಲರನ್ನು ಒಂದೆಡೆ ಕೂಡಿಸಿ, "ಓಹ್ಹೋ!, ಕುಂಬಳ ಕಾಯಿ ಕಳ್ಳನ ಹೆಗಲ ಮೇಲೆ ಇನ್ನು ಅದರ ಬೂದಿ ಹಾಗೆ ಇದೆಯಲ್ಲ?" ಎಂದು ನಗುತ್ತ ಹೇಳಿದರು. ತಕ್ಷಣ ನಿಜವಾದ ಕಳ್ಳನು ತನ್ನ ಭುಜವನ್ನು ಮುಟ್ಟಿದದಿಂದ, ಅವನು ಸಿಕ್ಕಿಹಾಕಿಕೊಂಡ ಎನ್ನುವ ಕಥೆಯಿಂದ ಈ ಗಾದೆ ಹುಟ್ಟಿದೆ. ಯಾರ ಬಗೇಗೋ ಮಾತಾಡುತ್ತಿರುವಾಗ, ತಮ್ಮ ಬಗ್ಗೆಯೇ ಹೇಳುತ್ತಿದ್ದಾರೆ, ತನ್ನ ವಿಷಯವನ್ನೇ ಮಾತಾಡುತ್ತಿದಾರೆ ಎಂದೆನಿಸಿಕೊಳ್ಳುವವರ ಬಗೆಗೆ ಈ ಗಾದೆಯನ್ನು ಉಪಯೋಗಿಸಬಹುದು. ತಾನು ತಪ್ಪು ಕೆಲಸ ಮಾಡಿ, ಇಡೀ ಜಗತ್ತು ಅದನ್ನೇ ಚರ್ಚಿಸುತ್ತಿದೆ ಎನ್ನುವ ಭಾವನೆಯ ಬಗೆಗೆ ಈ ಗಾದೆ. ತಮ್ಮ ಮನಸ್ಸಿನಲ್ಲಿರುವ ತಪ್ಪಿತಸ್ಥ ಮನಸ್ಥಿತಿಯನ್ನು ಉಲ್ಲೆಖಿಸುವಾಗ ಈ ಗಾದೆಯನ್ನು ಬಳಸುತ್ತಾರೆ. ತಪ್ಪಿತಸ್ಥನು ತನ್ನ ಕೆಲಸ, ಅಚಾತುರ್ಯದಿಂದ ಗುರುತಿಸಿಕೊಳ್ಳುವ ಬಗೆ ಇಲ್ಲಿ ಹೇಳಲಾಗಿದೆ. ತಪ್ಪಿತಸ್ಥನ ಮನಸ್ಸಿನಲ್ಲಿ ತಾನು ಮಾಡಿರುವುದು ತಪ್ಪು, ತನ್ನನ್ನು ಗುರುತಿಸುತ್ತಾರೆ ಎಂಬ ಭಾವನೆ ಇರುವ ಬಗೆ ಈ ಗಾದೆ ನಿರ್ದೇಶಿಸುತ್ತದೆ.