ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ನೀವು ಎಂದಾದರೂ ಒಂದು ಚಮಚ ಉಪ್ಪನ್ನು ಬಾಯಿಗೆ ಹಾಕಿಕೊಂಡಿದ್ದೀರಾ? ಇಲ್ಲವಾದರೆ ಇವತ್ತೇ ಮಾಡಿ ನೋಡಿ. ಉಪ್ಪು ತಿಂದ ತಕ್ಷಣ ಬಾಯೆಲ್ಲಾ ಒಗರು ಎನಿಸಿ ತಕ್ಷಣ ದಾಹವಾಗುತ್ತದೆ. ನೀರು ಕುಡಿಯಬೇಕು ಎನಿಸುತ್ತದೆ. ಇದೊಂದು ನಿತ್ಯಜೀವನದ ಸತ್ಯ.
ಹಾಗಾದರೆ ಈ ಗಾದೆಯ ಗುಟ್ಟೇನು? ಉಪ್ಪು ತಿನ್ನುವುದೆಂದರೆ ಬೇಡದಿರುವ ಕೆಲಸ ಮಾಡುವುದು. ಅಗತ್ಯ ಇರದ ಕಾರ್ಯವನ್ನು ಎಸಗುವುದು. ಆ ಕಾರ್ಯ ಆ ಸಮಯಕ್ಕೆ ಆ ಸ್ಥಳದಲ್ಲಿ ಬೇಕಾಗಿರುವುದಿಲ್ಲ. ಆದರೆ ಅದನ್ನು ಮಾಡಿರುತ್ತೇವೆ. ಹಾಗೆ ಮಾಡಿದ್ದಲ್ಲಿ ನೀರು ಕುಡಿಯಲೇ ಬೇಕು. ಅಂದರೆ, ಅದರಿಂದ ಆಗಬಹುದಾದ ಪರಿಣಾಮವನ್ನು ಅನುಭವಿಸಲೇಬೇಕು. ನಾವು ಮಾಡಿದ ಕಾರ್ಯಕ್ಕೆ ಪ್ರತಿಫಲವನ್ನು ಪಡೆಯಲೇಬೇಕು.ಕೆಟ್ಟ ಕೆಲಸವಾದಲ್ಲಿ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಒಳ್ಳೆಯ ಕೆಲಸವಾಗಲಿ ಅದರ ಪರಿಣಾಮ ಒಳ್ಳೆಯದೇ ಆಗಿರುತ್ತದೆ.
ಈ ಗಾದೆಯನ್ನು ಹೆಚ್ಚಾಗಿ ಕೆಟ್ಟ ಕೆಲಸ ಸಂದರ್ಭ ಉಪಯೋಗಿಸುತ್ತಾರೆ. ಉಪ್ಪು ತಿಂದ ಪರಿಣಾಮ ಸುಖಕರವಾಗಿರದು.
ಯಾವುದಾದರೂ ಕುಕರ್ಮದ ಪರಿಣಾಮ ನಮಗೆ ಸುಖದಾಯಕವಾಗುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು.