ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆ
ಒಂದೂರಲ್ಲಿ ಒಂದು ಅಜ್ಜಿ ತನ್ನ ಮೊಮ್ಮಗಳ ಜೊತೆ ವಾಸಿಸುತ್ತಿದ್ದಳು. ಹಣ ಸಂಪಾದಿಸುವವರು ಯಾರೂಯಿಲ್ಲದ್ದಿದ್ದ ಕಾರಣ ದಿನವೂ ಹೊಟ್ಟೆ ತುಂಬಿಸುಕೊಳ್ಳುವುದೇ ಒಂದು ಸಾಹಸವಾಗಿತ್ತು. ಆದರೆ ಹೇಗೋ, ಕಾಡಿ ಬೇಡಿಯೋ ಅಜ್ಜಿ, ಮೊಮ್ಮಗಳು ಇರುವುದರಲ್ಲಿ ಸಂತೋಷದಿಂದಿದ್ದರು.
ಒಂದು ದಿನ ಆಡುವಾಗ ಮೊಮ್ಮಗಳ ಬಟ್ಟೆ ಹರಿದು ಹೋಯಿತು. ಅಳುತ್ತಾ ಬಂದ ಮೊಮ್ಮಗಳನ್ನು ಹೊಸ ಬಟ್ಟೆ ಕೊಡುವೆಯೆಂದು ಸಮಾಧಾನಿಸಿದಳು ಅಜ್ಜಿ. ಸಂಜೆಗೆ ಸುಮ್ಮನೇ ಕುಳಿತಿರುವಾಗ ಮೊಮ್ಮಗಳಿಗೆ ಕಜ್ಜಾಯ ತಿನ್ನಬೇಕೆಂಬ ಆಸೆ ಉಂಟಾಯಿತು. ಹಾಗೇ ಅದನ್ನೇ ಆಲೋಚಿಸುತ್ತಾ ಕುಳಿತಳು. ಅಜ್ಜಿಗೆ ಹೊಸ ಬಟ್ಟೆ ಹೇಗೆ ಖರೀದಿಸುವುದು ಎಂದು ಯೋಚನೆ!
ಇಂಥಾ ಸ್ಥತಿಯನ್ನು ವಿವರಿಸುವಾಗ ಈ ಗಾದೆಯನ್ನು ಬಳಸುತ್ತಾರೆ. ಇಬ್ಬರು ಬೆೇರೆ ಬೇರೆ ಯೋಚನಾ ಲಹರಿಯಲ್ಲಿ ಸಾಗುವ ಸಂದರ್ಭದಲ್ಲಿ ಈ ಗಾದೆ ಸೂಕ್ತವಾಗಿದೆ. ಒಬ್ಬರಿಗೆ ಅತೀ ಅಗತ್ಯವಾದ ವಸ್ತುವಿನ ಬಗ್ಗೆ ಕಾಳಜಿ, ಇನ್ನೊಬ್ಬರಿಗೆ ಶೋಕಿ ವಸ್ತುವಿನ ಕಾಳಜಿ ಇರುವಾಗಲೂ ಈ ಗಾದೆ ಸೂಕ್ತವಾಗಿದೆ. ಅಜ್ಜಿಯು ತನ್ನ ಮೊಮ್ಮಗಳಿಗೆ ಮೂಲಭೂತವಾದ ಬಟ್ಟೆ ಹೇಗೆ ಕೊಡಿಸಲಿಯೆಂದು ವ್ಯಥೆ ಪಡುತ್ತದ್ದರೆ, ಮೊಮ್ಮಗಳು ಬಾಯಿ ಸಿಹಿ ಮಾಡುವುದರ ಬಗ್ಗೆ ತನ್ನ ಮನಸ್ಸನ್ನು ತೊಡಗಿಸುರುವುದು ವಿಪರ್ಯಾಸ.
ನಮ್ಮ ಜೀವನದಲ್ಲಿಯೂ ಹೀಗಿರುವ ಸಂದರ್ಭಗಳು ಬರುತ್ತವೆ. ನಮಗೆ ಮೂಲಭೂತ ಅಥವಾ ಅತೀ ಮುಖ್ಯ ವಿಷಯದ ಬಗ್ಗೆ ವಿಚಾರವಿದ್ದರೆ, ನಮ್ಮ ಗೆಳೆಯರಿಗೋ ಅಥವಾ ಮನೆಯವರಿಗೋ ನಮಗೆ ಕ್ಷುಲ್ಲಕವೆಂಬ ವಿಷಯದ ಬಗ್ಗೆ ಸಂವೇದನೆ. ಅಂಥಾ ಸ್ಥಿತಿಯ ಬಗ್ಗೆ ಉದ್ಘರಿಸುವಾಗ ಈ ಗಾದೆ ಸೂಕ್ತವಾಗುತ್ತದೆ.
Comments