ಊರೆಲ್ಲಾ ಸೋರಿ ಹೊದ ಮೇಲೆ ಊರ ಬಾಗಿಲು ಹಾಕಿದಂತೆ
ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಸುತ್ತಲೂ ಅದರ ರಕ್ಷಣೆಗೆ ರಾಜ ಕೋಟೆಯನ್ನು ಕಟ್ಟಿಸಿದ್ದ. ಒಂದು ದಿನ ವೈರಿ ರಾಜನ ಧಾಳಿಯಾಯಿತು. ವೈರಿ ಸೇನೆಯು ಕೋಟೆಯೊಳಕ್ಕೆ ನುಗ್ಗಿ ಲೂಟಿ ಮಾಡಲು ಪ್ರಾರಂಭಿಸಿದರು. ಜನರ ಹಾಹಾಕಾರ ಮುಗಿಲು ಮುಟ್ಟಿತ್ತು. ಸೈನ್ಯವು ಕೈಗೆ ಸಿಕ್ಕಿದನ್ನು ಹಾಳು ಮಾಡಿ ಸಂತೋಷ ಪಟ್ಟಿತ್ತು. ಇಡೀ ಕೋಟೆಯೊಳಗಿನ ಊರನ್ನು ನೆಲಸಮ ಮಾಡಿದ ಬಳಿಕ ಸೈನಿಕರು ಕೋಟೆಯ ಹೊರಗಿನ ಅವರ ಬಿಡಾರಕ್ಕೆ ಮರಳಿದರು. ಈಗ ಕೋಟೆಯ ಕಾವಲುಗಾರ ಎಚ್ಚೆತ್ತು, ಕೋಟೆಯ ಬಾಗಿಲನ್ನು ದೂಡಿ ಮುಚ್ಚಿದನಂತೆ. ಹೀಗೆ ಮುಚ್ಚಿದ ಬಾಗಿಲಿಂದ ಏನು ಪ್ರಾಯೋಜನ? ಊರಿಗೆ ಆಗಬಹುದಾದ ಹಾನಿ ಆಗಿಯಾಗಿದೆ. ಇನ್ನು ಸೈನಿಕರು ಇನ್ನೊಂದು ಸಲ ಬಂದರೂ ಅವರಿಗೇನೂ ದೊರಕದು. ನಾಶವಾಗಬಹುದುದುದೆಲ್ಲ ಹಾಳಾಗಿ ಆಗಿದೆ. ಇಂಥಾ ಸ್ಥಿತಿಯಲ್ಲಿ ಕೋಟೆಯ ಬಾಗಿಲು ಮುಚ್ಚಿದ್ದರೇನು? ತೆರೆದಿದ್ದರೇನು?
ಯಾವ ಕೆಲಸವನ್ನು ತುಂಬಾ ಸಮಯದ ಮುಂಚೆ ಮಾಡಬೇಕಾಗಿದ್ದು, ಅಕಾಲದಲ್ಲಿ ಮಾಡಿದರೆ ಅದರ ಪ್ರಯೋಜನ ಆಗುವುದಿಲ್ಲವೋ ಅಂಥಾ ಸಂದರ್ಭದಲ್ಲಿ ಈ ಗಾದೆಯ ಉಪಯೋಗ ಸಮರ್ಪಕವೆನಿಸುತ್ತದೆ.
ನಲ್ಲಿಯಲ್ಲಿ ನೀರುವಾರುವಾಗ ತಂಬಿಗೆ ಇಡದೇ, ನೀರು ನಿಂತು ಹೋದ ಮೇಲೆ ಒಳ್ಳೆಯ ಪಾತ್ರೆಯನ್ನು ಅಲ್ಲಿ ಇಟ್ಟರೆ, ನೋವಲ್ಲಿರುವಾಗ ಔಷಧಿ ಕೊಡದೆ, ನೋವು ಮರೆಯಾದಾಗ ಮದ್ದನ್ನು ತಂದರೆ ಈ ಗಾದೆ ಸಮಂಜಸವಾಗಿರುತ್ತದೆ.
Comentários